Saturday, December 29, 2007

'ನಮ್ಮ ನಾಳೆ' ಶಿಬಿರದ ಡಾ.ಕೆ.ವಿ.ಎನ್.ರವರ ಟಿಪ್ಪಣಿಗಳು

ಈ ಶಿಬಿರ ಏಕೆ?

ಈ ಕಾಲ ಮಾಹಿತಿಗಳ ಕಾಲ. ಯಾವ ವಿಷಯ ಕುರಿತು ಬೇಕಾದರೂ ಸಾಕಷ್ಟು ಮಾಹಿತಿ ನಮಗೆ ದೊರಕುತ್ತದೆ. ಆದರೆ ಆ ಮಾಹಿತಿಯಲ್ಲಿ ಎಷ್ಟು ಬೇಕು ಎಷ್ಟು ಬೇಡ ಎಂಬುದನ್ನು ಗುರುತಿಸಿಕೊಳ್ಳುವುದು ಕಷ್ಟ. ಅಲ್ಲದೆ ದೊರಕುವ ಮಾಹಿತಿ ನಿಜವಾಗಿಯೂ ನಮಗೆ ಬೇಕೆ ಬೇಡವೇ ಎಂಬುದನ್ನು ಕೂಡ ತಿಳಿಯಲಾಗದೆ, ಒಂದೇ ಸಮನೆ ಹರಿದು ಬರುವ ಮಾಹಿತಿಗಳಿಗೆ ಕಣ್ಣು ಕಿವಿಗಳನ್ನು ತೆರೆದಿಟ್ಟು ಕೊಳ್ಳುವ ಒತ್ತಾಯಕ್ಕೆ ನಾವು ಒಳಗಾಗಿದ್ದೇವೆ. ಇದಲ್ಲದೆ ಹೀಗೆ ಮಾಹಿತಿಯ ದಾಳಿಗೆ ಒಳಗಾಗುವ ನಾವು ಯಾವಾಗಲೂ ಒಬ್ಬಂಟಿಯಾಗಿರುತ್ತೇವೆ. ಇನ್ನೊಬ್ಬರೊಡನೆ ಈ ಮಾಹಿತಿಯ ದಾಳಿಯ ಪರಿಣಾಮವನ್ನು ಹಂಚಿಕೊಳ್ಳಲೂ ಆಗದ ಇಕ್ಕಟ್ಟಿನಲ್ಲಿ ನಮ್ಮನ್ನು ಕಟ್ಟಿಹಾಕಲಾಗಿದೆ. ಈ ಇಕ್ಕಟ್ಟಿನಿಂದ ಹೊರಬರಲು ನಾವು ಈ ಶಿಬಿರವನ್ನು ಯೋಜಿಸಿದ್ದೇವೆ. ಇಲ್ಲಿ ತಿಳಿದುಕೊಳ್ಳುವುದಕ್ಕಿಂತ ಹೆಚ್ಚಾಗಿ, ನಮಗೇನು ತಿಳಿದಿದೆ, ತಿಳಿದಿರುವುದರಲ್ಲಿ ಬೇಕಾದ್ದು ,ಬೇಡವಾದ್ದು ಯಾವುದು ಎಂಬುದನ್ನು ಗುರುತು ಮಾಡಿಕೊಳ್ಳುವುದಕ್ಕೆ ಹೆಚ್ಚು ಗಮನಹರಿಸೋಣ.

ಏನು ಮಾಡುತ್ತೇವೆ?
ಕೆಲವು ದಿನ ಒಟ್ಟಾಗಿ ಇರುತ್ತೇವೆ. ಮಾತುಕತೆಯಾಡುತ್ತಾ ಒಬ್ಬರಿಗೊಬ್ಬರು ಕನ್ನಡಿಯೋ ದೀಪವೋ ಆಗುತ್ತಾ ಇರುತ್ತೇವೆ. ಈ ವೇಳೆಯಲ್ಲಿ ನಮಗೆ ಗೊತ್ತಿಲ್ಲದ್ದನ್ನು ತಿಳಿಯುತ್ತ, ಏನು ಗೊತ್ತೆಂಬುದನ್ನು ಅರಿಯುತ್ತ ಇರಬೇಕೆಂಬುದು ನಮ್ಮ ಗುರಿ. ಹಾಗಾಗಿ ಇರುವುದು ಮತ್ತು ಅರಿಯುವುದು ಎರಡಕ್ಕೂ ಇಲ್ಲಿ ಜಾಗವಿದೆ. ನೂರಾರು ಸಮಸ್ಯೆಗಳು ನಮ್ಮನ್ನು ಸುತ್ತುವರೆದಿವೆ. ಅಥವಾ ಅವುಗಳ ನಡುವೆ ನಾವು ಸೇರಿಕೊಂಡಿದ್ದೇವೆ. ಈ ಸಮಸ್ಯೆಗಳು ನಮಗೆ ಮಾತ್ರ ಸಂಬಂಧಪಟ್ಟಿರುವಂತಹುಗಳಲ್ಲ. ನಮ್ಮನ್ನೂ ಸೇರಿಸಿಕೊಂಡಂತೆ ಎಲ್ಲರನ್ನು ಸೇರಿಸಿಕೊಂಡಿವೆ. ಅವುಗಳ ಪರಿಹಾರಕ್ಕೆ ದಾರಿಗಳನ್ನು ಹಲವರು ಸೂಚಿಸಿದ್ದಾರೆ. ಸಮಸ್ಯೆಯನ್ನು ನಾವು ಯಾವ ಚೌಕಟ್ಟಿನಲ್ಲಿ ಅರಿಯುತ್ತೇವೆಯೋ ಅದಕ್ಕನುಗುಣವಾಗಿ ಪರಿಹಾರವೂ ಕಾಣತೊಡಗುತ್ತದೆ. ಅಂದರೆ ಪರಿಹಾರವನ್ನು ಅರಿಯುವ ಮೂಲಕ ಸಮಸ್ಯೆಯನ್ನು ನಾವು ಅರಿತಿರುವ ಚೌಕಟ್ಟನ್ನು ತಿಳಿಯುವುದು ಸಾಧ್ಯ. ಈ ಚೌಕಟ್ಟನ್ನು ಬದಲಿಸಿದರೆ ಬೇರೆ ಪರಿಹಾರವೂ ಕಾಣಬಹುದು. ಇದು ನಮ್ಮ ಹುಡುಕಾಟ.

ನಮ್ಮನಿಮ್ಮೆಲ್ಲರ ಹೊಣೆ ಏನು?
ಎಲ್ಲರದ್ದೂ ಸಮಾನ ಹೊಣೆಗಾರಿಕೆ. ಹೇಳುವವರು ಕೆಲವರು ಕೇಳುವವರು ಹಲವರು ಎಂಬ ನೆಲೆ ಇಲ್ಲಿ ಬೇಡ. ಏನು ಚರ್ಚಿಸ ಬೇಕು ಎಂಬುದನ್ನು ಎಲ್ಲರೂ ಕೂಡಿ ನಿರ್ಣಯಿಸುವುದು ಒಳಿತು. ಈ ಚರ್ಚೆಗಳ ಹರಹು ಎಷ್ಟಿರಬೇಕು ಎಂಬುದನ್ನು ಕೂಡ ಎಲ್ಲರೂ ಒಟ್ಟಾಗಿ ಗೊತ್ತು ಮಾಡೋಣ. ಇಲ್ಲದಿದ್ದರೆ ಎಲ್ಲವೂ ಜಾಳುಜಾಳಾಗಿ ಯಾರಿಗೂ ಕೆಲಸಕ್ಕೆ ಬಾರದಂತೆ ಸಮಯ ಕಳೆಯುತ್ತದೆ. ಏಕೆಂದರೆ ಯಾವುದೇ ವಿಷಯವನ್ನು ನಮಗೆ ಸಂಬಂಧಿಸಿದಂತೆ ಚರ್ಚಿಸಲು ಇರುವಷ್ಟೇ ಅವಕಾಶ ಅದರಿಂದ ನಮ್ಮನ್ನು ಹೊರಗಿಟ್ಟು ಚರ್ಚಿಸಲು ಕೂಡ ಇರುತ್ತದೆ. ಎರಡನೆಯ ಹಾದಿ ಸುಲಭವಾದದ್ದು. ಅಷ್ಟೇ ನಿರುಪಯುಕ್ತವಾದದ್ದು. ಈ ಮಾದರಿಯ ಚರ್ಚೆಗಳು ನಮಗೆ ಮಾಧ್ಯಮಗಳಲ್ಲಿ ದಂಡಿಯಾಗಿ ಕೇಳ ಸಿಗುತ್ತವೆ. ಇದನ್ನು ಬಿಟ್ಟು ನಮ್ಮನ್ನು ಒಳಗೊಳ್ಳುವ ಹಾದಿಯನ್ನು ಹಿಡಿಯಬೇಕೆಂಬುದು ನಮ್ಮ ಆಸೆ.

ಏನೆಲ್ಲ ವಿಷಯಗಳಿವೆ?
ಅಭಿವೃದ್ದಿಯ ಮಾದರಿಗಳು, ಸಂಸ್ಕೃತಿ ಕುರಿತ ಚಿಂತನೆಗಳು, ಧಾರ್ಮಿಕ ಮೂಲಭೂತವಾದ, ಪ್ರಜಾಪ್ರಭುತ್ವದ ಹೊಸ ವಿನ್ಯಾಸಗಳು, ಸಮಾಜ ರಚನೆಯಲ್ಲಿ ಆಗುತ್ತಿರುವ ಪಲ್ಲಟಗಳು. ತಿಳಿವಿನ ಹಲವು ಹಾದಿಗಳು. ನಮಗೆ ಪರಿಚಿತವಲ್ಲದ ಜೀವನ ವಿಧಾನಗಳು, ವಿಜ್ಞಾನದ ಸಾಮಾಜಿಕ ಹೊಣೆ, ಬುದ್ದಿಯ ಹೊಸ ಹೊಣೆಗಳು, ಭಾಷೆಯ ಬಗೆಗಿನ ಹೊಸ ತಿಳುವಳಿಕೆಗಳು ಹೀಗೆ ಹತ್ತಾರು ವಲಯಗಳಿವೆ. ಇವೆಲ್ಲವೂ ನಮ್ಮ ಚರ್ಚೆಯಲ್ಲಿ ಆಗಾಗ ಸುಳಿಯುತ್ತಲೇ ಹೋಗುತ್ತಿರುತ್ತವೆ. ಆದರೆ ಅವುಗಳನ್ನು ನಾವು ಬೇಕೆಂದ ರೀತಿಯಲ್ಲಿ ಕಟ್ಟಿಕೊಳ್ಳುವ ಯತ್ನಗಳನ್ನು ಈ ಶಿಬಿರದ ಅವಧಿಯಲ್ಲಿ ಮಾಡಬೇಕಿದೆ.

ಮೊದಲಿಗೆ ನಾವೇನು ಮಾಡಬೇಕು?
ನಾವು ಇಲ್ಲಿ ಚರ್ಚಿಸ ಬಹುದಾದ ವಿಷಯಗಳ ಪಟ್ಟಿಯೊಂದನ್ನು ಮಾಡೋಣ. ಆ ಪಟ್ಟಿಯಲ್ಲಿ ಆದ್ಯತೆಯ ಮೇರೆಗೆ ಐದು ವಿಷಯಗಳನ್ನು ಸೂಚಿಸೋಣ. ಹೆಚ್ಚು ವಿಷಯಗಳು ಬೇಡ. ಆ ವಿಷಯಗಳನ್ನು ಕುರಿತ ಮ್ಮ ಚಿಂತನೆಗಳನ್ನು ಪ್ರತಿ ವಿಷಯಕ್ಕೂ ಒಂದು ಪುಟಕ್ಕೆ ಮೀರದಂತೆ ಟಿಪ್ಪಣಿಯಲ್ಲಿ ದಾಖಲು ಮಾಡೋಣ. ಇವೆಲ್ಲವನ್ನು ಒಟ್ಟಾಗಿರಿಸಿಕೊಂಡು ಏನು ಮಾಡಬಹುದೆಂಬುದನ್ನು ಆಮೇಲೆ ಯೋಚಿಸೋಣ.

ನಾವೇನು ಮಾಡಬೇಕು?

ಪ್ರತಿ ದಿನವೂ ನಾಲ್ಕು ಅವಧಿಗಳಲ್ಲಿ ಸೇರೋಣ. ಆಗ ಒಂದೊಂದು ವಿಷಯವನ್ನು ಕುರಿತು ಮೊದಲು ಹತ್ತು ಹದಿನೈದು ನಿಮಿಷಗಳ ಕಾಲ ಮೊದಲ ಮಾತನ್ನು ಕೇಳಿಸಿಕೊಳ್ಳೋಣ. ಬಳಿಕ ಗುಂಪುಗಳಲ್ಲಿ ಅದೇ ವಿಷಯವನ್ನು ಕುರಿತು ಬೇರೆ ಬೇರೆ ನೆಲೆಗಳಲ್ಲಿ ಮತ್ತು ನಮ್ಮ ನಮ್ಮ ಅನುಭವ ಮತ್ತು ಓದಿನ ಹಿನ್ನೆಲೆಯಲ್ಲಿ ಮಾತಾಡಿಕೊಳ್ಳೋಣ. ಅಲ್ಲಿ ನಡೆದ ಮಾತುಕತೆಗಳನ್ನು ಆ ಗುಂಪಿನ ಯಾರಾದರೊಬ್ಬರು ಒಟ್ಟಾಗಿಸಿ ಎಲ್ಲರೆದುರು ಹೇಳಬೇಕು ಇಲ್ಲವೇ ಬರೆದು ಓದಬೇಕು.

ಒಂದು ಅವಧಿಯ ಮಾತುಕತೆಯ ಬಳಿಕ ಮುಂದಿನ ಅವಧಿಯ ಚರ್ಚೆಯ ವಿಷಯ ಅಲ್ಲಿಯೇ ಮೈ ತಳೆಯುತ್ತದೆ. ಒಂದಕ್ಕೊಂದು ಸಂಬಂಧವುಳ್ಳ ವಿಷಯಗಳ ಸರಣಿಯೊಂದನ್ನು ಒಟ್ಟಾಗಿ ರೂಪಿಸಿಕೊಳ್ಳೋಣ

ಮೊದಲು ನೆನಪು ಕುರಿತಂತೆ ಚರ್ಚೆ ಮೊದಲಾಗುತ್ತದೆ. ನೆನಪು ಹಲವು ನೆಲೆಗಳ:ನ್ನು ಹೊಂದಿದೆ. ಅದು ಸ್ವಂತದ್ದಾಗಿರಬಹುದು. ಅಲ್ಲದೆ ಸಾಂಸ್ಕೃತಿಕ ನೆನಪು, ಸಾಮಾಜಿಕ ನೆನಪು ಎಂಬ ಮಾತುಗಳೂ ಇವೆ. ನೆನಪಿಗೂ ಚರಿತ್ರೆಗೂ ಇರುವ ಸಂಬಂಧಗಳು ಇನ್ನೊಂದು ಚರ್ಚೆಯ ವಿಷಯ. ರಾಷ್ಟ್ರೀಯತೆಗೂ ಚರಿತ್ರೆಗೂ ಇರುವ ಸಂಬಂಧವನ್ನು ಚರ್ಚಿಸುತ್ತ ಮತ್ತೆ ನೆನಪುಗಳ ಪಾತ್ರವನ್ನು ಚರ್ಚಿಸುತ್ತೇವೆ. ನಮ್ಮ ಶ್ರೇಣೀಕೃತ ಸಮಾಜದಲ್ಲಿ ನೆನಪುಗಳಿಗೆ ಇರುವ ಮಹತ್ವವನ್ನು ಕುರಿತು ಮಾತಾಡಬೇಕು.
ನಮ್ಮ ಜಾನಪದ ಅಧ್ಯಯನಗಳು ರೂಪಿಸುತ್ತಿರುವ ಸಾಮುದಾಯಿಕ ಮತ್ತು ಸಾಮೂಹಿಕ ನೆನಪುಗಳ ಧನಾತ್ಮಕ ನೆಲೆಗಳೇನು ಎಂಬುದನ್ನು ಚರ್ಚಿಸಬೇಕಾಗಿದೆ.

ನಮ್ಮ ಇಂದಿನ ಹಲವು ಹಲವು ಕಾಳಜಿಗಳಲ್ಲಿ ತಾಳಿಕೆಯುಳ್ಳ ಬೆಳವಣಿಗೆ ಕೂಡ ಒಂದಾಗಿದೆ. ಇದನ್ನು ಜಾಗತೀಕರಣದ ಹಿನ್ನೆಲೆಯಲ್ಲಿ ವ್ಯಾಖ್ಯಾನಿಸಿಕೊಳ್ಳುವುದು ಒಂದು ಅಗತ್ಯ. ಸಿದ್ಧ ಚೌಕಟ್ಟುಗಳ ಮಿರಿಯನ್ನು ಗಮನಿಸುತ್ತ ಜಾಗತಿಕವಾಗಿ ಲಭಿಸುತ್ತಿರುವ ಚಿಂತನಾ ಮಾದರಿಗಳನ್ನು ಪರಿಶೀಲನೆಗೆ ತೆಗೆದುಕೊಳ್ಳಬೇಕಾಗಿದೆ.

ನಮ್ಮ ಸಮಕಾಲೀನ ಸಮಸ್ಯೆಗಳನ್ನು ಗುರುತಿಸಿಕೊಂದು ಅವುಗಳ ನಡುವೆ ಇರುವ ಸಂಬಂಧಗಳನ್ನು ಕುರಿತು ಚರ್ಚಿಸುವುದು ಇನ್ನೊಮದು ಜವಾಬ್ದಾರಿ. ನಾವೆಲ್ಲರೂ ಅಂತಹ ಸಮಸ್ಯೆಗಳ ಪಟ್ಟಿಯೊಂದನ್ನು ಮೊದಲು ತಯಾರಿಸಿಕೊಳ್ಳೋಣ. ಬಳಿಕ ಒಟ್ಟಾಗಿ ಕುಳಿತು ಅವುಗಳೊಡನೆ ಸಂವಾದವನ್ನು ಬೆಳೆಸೋಣ.

ಐದು ದಿನಗಳಲ್ಲಿ ಒಟ್ಟು ಹದಿನೆಂಟು ಅವಧಿಗಳು ನಮಗೆ ದೊರಕುವುದು ಸಾಧ್ಯ. ಅವುಗಳನ್ನು ಹೇಗೆ ಉಪಯೋಗಸಿಕೊಳ್ಳಬೇಕೆಂಬುದನ್ನು ಮೊದಲ ಅವಧಿಯಲ್ಲಿ ನಾವೇ ಚರ್ಚಿಸಿ ನಿರ್ಣಯಿಸಿಕೊಳ್ಳೋಣ. ಸಮಯ ಮತ್ತು ನಮ್ಮ ಸಾಧ್ಯತೆಗಳನ್ನು ಹೊಂದಿಸುವುದು ನಮ್ಮೆಲ್ಲರ ಗುರಿಯಾಗ ಬೇಕಲ್ಲವೇ?

ನೆನಪು ಮತ್ತು ಚರಿತ್ರೆ

ಚರಿತ್ರೆಯನ್ನು ಮರೆತವರು ಅದನ್ನು ಪುನರಾವರ್ತಿಸುವ ಶಾಪಕ್ಕೆ ಒಳಗಾಗುತ್ತಾರೆ ಎನ್ನುವುದು ಒಂದು ಹೆಸರಾಂತ ಹೇಳಿಕೆ. ಈ ಮಾತನ್ನು ಸಮರ್ಥಿಸಲು ಹತ್ತಾರು ಸಂಕಥನಗಳನ್ನು ನಮ್ಮೆದುರು ಮಂಡಿಸಲಾಗಿದೆ. ಆದರೆ ಇಪ್ಪತ್ತನೆಯ ಶತಮಾನದಲ್ಲಿ ನಡೆದದ್ದನ್ನು ಗಮನಿಸಿದ ಹಲವು ಚಿಂತಕರು ಈ ಹೇಳಿಕೆಯನ್ನು ಬದಲಿಸಬೇಕೆಂದು ಹೇಳುತ್ತಿದ್ದಾರೆ. ಅವರ ಪ್ರಕಾರ ಚರಿತ್ರೆಯನ್ನು ನೆನಪಿಟ್ಟುಕೊಳ್ಳುವವರು ಅದನ್ನು ಪುನರಾವರ್ತಿಸುವ ಶಾಪಕ್ಕೆ ಒಳಗಾಗುತ್ತಾರೆ. ಈ ಬದಲಾದ ಗ್ರಹಿಕೆಗೆ ಕಾರಣಗಳೇನು? ಕಳೆದ ಶತಮಾನದಲ್ಲಿ ಎರಡನೆಯ ಮಹಾಯುದ್ಧ ಮತ್ತು ಅನಂತರದ ಕೆಲವು ಸಂಘರ್ಷಗಳು ಜನಸಮುದಾಯದ ನೆನಪುಗಳನ್ನು ಕಟ್ಟಿಕೊಡುವ ಮತ್ತು ಆ ನೆನಪುಗಳಿಗೆ ಅವರನ್ನು ಹಕ್ಕುದಾರರನ್ನಾಗಿ ಮಾಡುವ ಮೂಲಕವೇ ಸಂಭವಿಸಿದವು. ಈಗಲೂ ಹೀಗೆ ಸಮುದಾಯದ ನೆನಪುಗಳನ್ನು ಉದ್ದೀಪಿಸುವ ಮತ್ತು ಆ ನೆನಪುಗಳನ್ನು ಆ ಸಮುದಾಯದ ಗುರುತುಗಳನ್ನಾಗಿ ಮಾಡುವ ಕೆಲಸ ಎಡೆಬಿಡದೆ ನಡೆಯುತ್ತಲೇ ಇದೆ. ಹೀಗಾಗಿ ನೆನಪುಗಳಿಗೂ ಚರಿತ್ರೆಗೂ ಇರುವ ಸಂಬಂಧವನ್ನು ಮರುಚಿಂತನೆಗೆ ಒಳಪಡಿಸ ಬೇಕಾಗಿದೆ.

ನೆನಪು ಎಂದರೇನು? ಆಗಿಹೋದದ್ದರ ಮರುಗಳಿಕೆಯೇ ನೆನಪು. ಎಲ್ಲ ಸಂಗತಿಗಳೂ ನಮ್ಮ ನೆನಪಿನಲ್ಲಿ ಉಳಿಯುವುದಿಲ್ಲ. ನಾವು ಮರೆಯುವುದು ಸಹಜ. ಏನನ್ನು ಮರೆಯುತ್ತೇವೆ ಮತ್ತು ಏನನ್ನು ನೆನಪಿನಲ್ಲಿ ಇಟ್ಟುಕೊಳ್ಳುತ್ತೇವೆ ಎಂಬುದು ನಮ್ಮ ಆಯ್ಕೆಯಲ್ಲ. ಇದನ್ನು ನಿರ್ಧರಿಸುವ ಸಂಗತಿಗಳು ಹಲವಿವೆ. ಕೆಲವು ಸಂಗತಿಗಳನ್ನು ಮರೆಯ ಬೇಕೆನ್ನುತ್ತೇವೆ;ಆದರೆ ಮರೆಯಲಾರೆವು. ಹಾಗೆಯೇ ಕೆಲವು ಸಂಗತಿಗಳನ್ನು ನೆನಪಿಡಬೇಕೆಂದು ಕೊಳ್ಳುತ್ತೇವೆ;ಆದರೆ ಸುಲಭವಾಗಿ ಮರೆತು ಬಿಡುತ್ತೇವೆ.
ಇದು ವ್ಯಕ್ತಿಯ ಸಮಸ್ಯೆ ಎಂದುಕೊಳ್ಳೋಣ. ವ್ಯಕ್ತಿಯಲ್ಲೂ ನೆನಪು ಏಕೆ ಅಗತ್ಯ? ಅದು ನಮ್ಮ ವರ್ತಮಾನಕ್ಕೆ ಏನನ್ನು ಒದಗಿಸುತ್ತದೆ? ಈ ಕುರಿತು ಚಿಂತನೆ ನಡೆಸಬೇಕಿದೆ.

ವ್ಯಕ್ತಿಗೆ ನೆನಪುಗಳಿರುವಂತೆ ಸಮುದಾಯಗಳಿಗೂ ನೆನಪು ಇರುವುದೇ? ಇದೆಯೆಂದು ಕೆಲವು ಚಿಂತನಾ ವಿಧಾನಗಳು ಹೇಳುತ್ತವೆ. ಈ ಸಾಮುದಾಯಿಕ ನೆನಪುಗಳು ಇರುತ್ತವೆಯೋ ಅಥವಾ ಅದು ಇದೆಯೆಂದು ನಾವು ತಿಳಿಯುತ್ತವೆಯೋ. ಅಂದರೆ ಸಮುದಾಯಗಳಿಗಾಗಿ ನೆನಪನ್ನು ಕಟ್ಟಿಕೊಡುವ ಕೆಲಸವನ್ನು ಬೇರೆ ಯಾರಾದರೂ ಉದ್ದೇಶಪೂರ್ವಕವಾಗಿ ಮಾಡಬೇಕಾಗುತ್ತದೆ. ಇದನ್ನೇ ಚರಿತ್ರೆ ಎಂದು ನಂಬಿಸಲಾಗುತ್ತದೆ. ಚರಿತ್ರೆ ಎಂದರೆ ಆಗಿಹೋಗಿದ್ದರ ಸಂಕಥನ ಎನ್ನುವ ವ್ಯಾಖ್ಯೆಯನ್ನು ಒಪ್ಪಿದರೆ ಈ ಸಂಕಥನ ಇರುವುದಿಲ್ಲ;ಅದನ್ನು ಕಟ್ಟಲಾಗುತ್ತದೆ ಎಂದೂ ಒಪ್ಪಬೇಕಾಗುತ್ತದೆ. ಆದ್ದರಿಂದ ಚರಿತ್ರೆ ಎನ್ನುವುದು ಸಮುದಾಯದ ನೆನಪಿನಿಂದ ಕಟ್ಟಿದ್ದು ಎನ್ನುವುದು ಎಷ್ಟು ದಿಟವೋ ಆ ನೆನಪುಗಳು ಸಮುದಾಯಕ್ಕೆ ಇವೆ ಎಂದು ನಂಬಿಸಲಾಗುತ್ತದೆ ಎನ್ನುವುದೂ ಅಷ್ಟೇ ನಿಜ.

ಸಮುದಾಯಗಳು ಚರಿತ್ರೆಯನ್ನು ಅವಲಂಬಿಸಿ ಬದುಕುವ ಅನಿವಾರ್‍ಯಕ್ಕೆ ಒಳಗಾಗಿವೆಯೇ? ಸಮುದಾಯಗಳನ್ನು ಒತ್ತಟ್ಟಿಗಿಡಲು ಇಂತಹ ಚರಿತ್ರೆಗಳು ಅಗತ್ಯವೇ? ಹತ್ತೊಂಬತ್ತನೆಯ ಶತಮಾನದಲ್ಲಿ ರಾಷ್ಟ್ರಗಳನ್ನು ವ್ಯಾಖ್ಯಾನಿಸುವಾಗ,ರಾಷ್ಟ್ರೀಯತೆಯನ್ನು ನಿರೂಪಿಸುವಾಗ ಸಮುದಾಯಗಳ ಗುರುತಾಗಿ ಚರಿತ್ರೆಯೊಂದು ಇರಬೇಕೆಂದು ಹೇಳಲಾಯಿತು. ಚರಿತ್ರೆಗಳಿಲ್ಲದ ಸಮುದಾಯಗಳಿಗೆ ರಾಷ್ಟ್ರವೆನಿಸಿಕೊಳ್ಳುವ ಅರ್ಹತೆ ಇದೆಯೇ ಎಂಬುದು ಕೂಡ ಒಂದು ಪ್ರಶ್ನೆಯಾಗಿತ್ತು. ಇದನ್ನು ಹಲವು ದಶಕಗಳ ಕಾಲ ಗಾಢವಾಗಿ ನಂಬಲಾಗಿತ್ತು. ನಂಬಬೇಕಾದ ಒತ್ತಾಯಗಳಿದ್ದವು. ವಸಾಹತು ಆಡಳಿತಗಳಿಂದ ಬಿಡುಗಡೆಯಾಗಲು ರಾಷ್ಟ್ರೀಯತೆಯ ಪರಿಕಲ್ಪನೆಯನ್ನು ರೂಢಿಸುವುದು ಅತ್ಯಗತ್ಯವಾಗಿತ್ತು. ಇದು ಕೇವಲ ಭಾವನಾತ್ಮಕ ಅಗತ್ಯವಷ್ಟೇ ಆಗಿರಲಿಲ್ಲ. ಆರ್ಥಿಕ ಮತ್ತು ಸಾಮಾಜಿಕ ಅಗತ್ಯಗಳೂ ಆಗ ಇದ್ದವು. ರಾಷ್ಟ್ರೀಯತೆಗೂ ಚರಿತ್ರೆಗೂ ಇರುವ ಸಂಬಂಧವನ್ನು ಮರು ಚಿಂತನೆಗೆ ಗುರಿಪಡಿಸುವ ಕಾಲ ಈಗ ಒದಗಿಬಂದಿದೆ.

ಸಾಮುದಾಯಿಕ ನೆನಪುಗಳನ್ನು ಸಾಂಸ್ಕೃತಿಕ ಮತ್ತು ಸಾಮಾಜಿಕ ನೆಲೆಯಲ್ಲಿಯೂ ವ್ಯಾಖ್ಯಾನಿಸಲಾಗುತ್ತದೆ. ಈ ನೆನಪುಗಳು ಸಮಾಜದ ಉಳಿಕೆ ಮತ್ತು ಮುಂದುವರಿಕೆಗೆ ಅಗತ್ಯವೆಂಬ ಚಿಂತನೆಗಳೂ ಇವೆ. ಅಲ್ಲದೆ ಸಂಸ್ಕೃತಿ ಎಂದರೆ ಸಂಚಯಿತ ನೆನಪುಗಳು ಎಂಬ ತಿಳುವಳಿಕೆಯೂ ಇದೆ. ಈ ಸಂಚಯಿತ ನೆನಪುಗಳನ್ನು ತಲೆಮಾರಿನಿಂದ ತಲೆಮಾರಿಗೆ ದಾಟಿಸುವ ಹಲವು ವ್ಯವಸ್ಥೆಗಳನ್ನೂ ಸಮುದಾಯಗಳು ರೂಪಿಸಿಕೊಂಡಿವೆ. ಈ ಸಂಚಯಿತ ನೆನಪುಗಳನ್ನು ಜೋಪಾನವಾಗಿ ಕಾಯ್ದಿರಿಸುವ ಮತ್ತು ಅದರ ಮಹತ್ವವನ್ನು ಗಟ್ಟಿಮಾಡುವ ಬಗೆಗಳನ್ನೂ ಕಟ್ಟಿಕೊಳ್ಳಲಾಗಿದೆ.

ಚರಿತ್ರೆ ನೆನಪಿನ ಪುನಾರಚನೆ ಎಂದೆವು. ಇದಕ್ಕೆ ಹಲವು ಆಕರಗಳನ್ನು ಹುಡುಕಿಕೊಳ್ಳಲಾಗಿದೆ. ಸಮುದಾಯದ ಸಂಚಯಿತ ನೆನಪುಗಳನ್ನು ಅಗೆದು ತೆಗೆಯಲು ಮೌಖಿಕ ಸಂಕಥನಗಳನ್ನು ನೆಮ್ಮುವುದು ಒಂದು ಬಗೆ. ಈ ಸಂಕಥನಗಳ ಮಾದರಿಗಳು ಹಲವು. ತಮ್ಮ ನೆನಪುಗಳನ್ನು ತಾವೇ ನಿರೂಪಿಸುವ ಬಗೆ ಒಂದಾದರೆ ತಮ್ಮ ಮೂಲಕ ಎಲ್ಲರ ನೆನಪುಗಳನ್ನು ದಾಟಿಸಲು ಯತ್ನಿಸುವ ಬಗೆ ಇನ್ನೊಂದು ಇವೆರಡೂ ಈಗ ಯಾವ ಪರಿಣಾಮವನ್ನು ಉಂಟುಮಾಡುತ್ತಿವೆ ಎನ್ನುವುದನ್ನು ಪರಿಶೀಲಿಸುವುದು ಈಗ ಅಗತ್ಯವಾಗಿದೆ.