Tuesday, December 2, 2008

ಮತಾಂತರ- ಒಂದು ಚರ್ಚೆ' ಟಿಪ್ಪಣಿಗೆ ಡಾ. ಬಿ.ಎಂ.ಪುಟ್ಟಯ್ಯನವರ ಪ್ರತಿಕ್ರಿಯ

ಡಾ. ಕೆ.ವಿ.ಎನ್. ರವರ `ಮತಾಂತರ- ಒಂದು ಚರ್ಚೆ' ಟಿಪ್ಪಣಿಗೆ ಡಾ. ಬಿ.ಎಂ.ಪುಟ್ಟಯ್ಯನವರ ಪ್ರತಿಕ್ರಿಯೆ ಇಲ್ಲಿದೆ. ಇದೂ ಸಹ ಚರ್ಚೆಗೆ ಸಿದ್ಧವಾಗಲು ಅನುಕೂಲವಾಗುತ್ತದೆ.


ಮತಾಂತರ: ಚರ್ಚೆಗೆ ಒಂದು ಪ್ರವೇಶ (ಕರಡು ಪ್ರತಿ)
ಡಾ. ಬಿ. ಎಂ. ಪುಟ್ಟಯ್ಯ
(ಒಂದು ಕಡೆ `ಮತಾಂತರ’ವೂ ಮತ್ತೊಂದು ಕಡೆ ಅದನ್ನು ಕುರಿತು ಚರ್ಚೆಯೂ ನಡೆಯುತ್ತಿದೆ. ಇದನ್ನು ನೋಡುವ ವಿಧಾನ ಹಾಗೂ ದೃಷ್ಟಿಕೋನದ ಬಗೆಗೆ ಒಂದು ಟಿಪ್ಪಣಿ)

೧. `ಮತಾಂತರ’ ಆಗುತ್ತಿರುವವರ ಚಲನಶೀಲ ವಸ್ತುಸ್ಥಿತಿಯ ಬಗ್ಗೆ ಇನ್ನೂ ಹೆಚ್ಚಿನ ಅರಿವು ಅಗತ್ಯವಿದೆ. `ಮತಾಂತರ’ ಆಗುತ್ತಿರುವವರು ಸಮಾಜದ ಅಂಚಿನವರು ಮತ್ತು ಅಸ್ಪೃಶ್ಯರು. ಯಾರ ಲಾಭಕ್ಕಾಗಿ ಅವರ ವಸ್ತುಸ್ಥಿತಿಯನ್ನು ಇನ್ನೂ ಹಾಗೇ ಇಡಲಾಗಿದೆ ಎಂಬ ಪ್ರಶ್ನೆ ಬಹಳ ಮುಖ್ಯ.

೨. `ಮತಾಂತರ’ ಆಗುತ್ತಿರುವವರನ್ನು, ಹಸಿವು ಮತ್ತು ಅಪಮಾನಗಳ, ಅಸಹಾಯಕತೆ ಹಾಗೂ ಪ್ರತಿರೋಧಗಳ ವಸ್ತುಸ್ಥಿತಿ ಎಂದು ಕರೆಯಬಹುದು. ಬಲಾತ್ಕಾರದ ಶೋಷಣೆಯಿಂದ ನಿರ್ಮಿಸಿರುವ ಹಸಿವು ಮತ್ತು ಸುತ್ತುವರೆದ ಅಪಮಾನಗಳು ಯಾವುದೇ ಸಮಾಜ ಜೀವಿಯ ಕನಿಷ್ಠ ವ್ಯಕ್ತಿತ್ವವನ್ನು ಕೊಂದು ಅಸಹಾಯಕತೆಗೆ ಎಸೆಯುತ್ತವೆ. ಇದು ಕೇವಲ ಘಟನೆಯ ರೀತಿಯದಲ್ಲ. ಇದೊಂದು ನಿರಂತರ ಪ್ರಕ್ರಿಯೆ. ಇದು ಅಸಹಾಯಕತೆಯನ್ನು ಮಾತ್ರವಲ್ಲದೆ ಅದರೊಳಗಿನಿಂದಲೇ ಪ್ರತಿರೋಧವನ್ನೂ ಹುಟ್ಟಿಸುತ್ತದೆ. ಪ್ರತಿರೋಧವು ರಾಜಕೀಯವಾಗಿ ಬಲಶಾಲಿಯಾಗಿದ್ದಾಗ ಇವರಿಗೆ ಶಕ್ತಿಯಾಗಿಯೂ, ದುರ್ಬಲವಾಗಿದ್ದಾಗ ಶಾಪವಾಗಿಯೂ ಪರಿಣಮಿಸುತ್ತದೆ.

೩. ಇವರಿಗೆ (ದಲಿತ, ಕೆಳಮಧ್ಯಮ ವರ್ಗ, ಅನಕ್ಷರಸ್ಥರು ಮತ್ತು ಸಾಮಾಜಿಕ ನ್ಯಾಯದ ತೀವ್ರ ಸೆಳೆತಕ್ಕೆ ಒಳಗಾದವರು) ತಮ್ಮ ಸ್ಥಿತಿಯ ಬಗ್ಗೆ ಒಂದು ಬಗೆಯ ಅರಿವು ಬಂದಾಗ, ಅದು ಪ್ರತಿರೋಧ ಮತ್ತು ಸ್ವಾಭಿಮಾನಗಳನ್ನು ಹುಟ್ಟಿಸುತ್ತದೆ. ಇವು ಬೇರೆಬೇರೆ ಸ್ವರೂಪದಲ್ಲಿ ಕೆಲಸ ಮಾಡಬಹುದು.
ಅಸಮಾನತೆಯ ಲಾಭ ಪಡೆಯುವವರಿಗೆ ಇವರ ಪ್ರತಿರೋಧ ಮತ್ತು ಸ್ವಾಭಿಮಾನ ಬೇಕಾಗಿರುವುದಿಲ್ಲ. ಹಾಗಾಗಿ ಇವನ್ನು ಸಮಾಜವಿರೋಧಿ ಎಂದು ಗುರುತಿಸಲಾಗುತ್ತದೆ. ಆ ನೆಪದಲ್ಲಿ ಇವರನ್ನು ಮತ್ತೊಮ್ಮೆ ಹತ್ತಿಕ್ಕುವ, ಅವಹೇಳನ ಮಾಡುವ ಕ್ರಿಯೆ ಶುರುವಾಗುತ್ತದೆ. ಇವರು ಯಾವುದನ್ನು (ಪ್ರಜ್ಞೆ, ಅರಿವು ಇತ್ಯಾದಿ) ಬಿಡುಗಡೆ ಎಂದು ತಿಳಿದಿದ್ದರೋ ಅದುವೇ ಅವರ ಹೊಸಬಗೆಯ ಹತ್ತಿಕ್ಕುವಿಕೆಗೆ/ ಅವಹೇಳನಕ್ಕೆ ಕಾರಣವಾಗುತ್ತದೆ. ಆಗ ಪರ್ಯಾಯ ದಾರಿಗಳ ಹುಡುಕಾಟ ಮೊದಲಾಗುತ್ತದೆ. ಅಂತಹ ದಾರಿಗಳು ಹಲವು ಇರಬಹುದು.

೪. ಆರ್ಥಿಕ, ಸಾಮಾಜಿಕ ದಮನ ಹಾಗೂ ಅವಹೇಳನಗಳು ಸ್ಥೂಲ ಹಾಗೂ ಸೂಕ್ಷ್ಮ ವಿಧಾನಗಳಲ್ಲಿ ನಡೆಯುತ್ತಿವೆ. `ಇವುಗಳನ್ನು ಗುರುತಿಸುವುದು ಮತ್ತು ವಿರೋಧಿಸುವುದು ನ್ಯಾಯವಲ್ಲ, ಸಭ್ಯತೆಯಲ್ಲ’ ಎಂಬ ಒತ್ತಡ ಪ್ರಭುತ್ವದ್ದು ಹಾಗೂ `ನಾಗರಿಕ ಸಮಾಜ’ದ್ದು. ಹಾಗಾಗಿ ಇಂತಹ ಸೂಕ್ಷ್ಮ ಅವಹೇಳನಗಳನ್ನು ಅನುಭವಿಸಿಯೂ ಅನುಭವಿಸಿಲ್ಲವೆಂದು ಬಲಾತ್ಕಾರವಾಗಿ ಮುಚ್ಚಿಟ್ಟುಕೊಳ್ಳುವ ಕ್ರೂರ ಸ್ಥಿತಿ ಇದೆ. `ಹತ್ತಿಕ್ಕುವುದು, ಅಪಮಾನಿಸುವುದು ನಮ್ಮ ಹಕ್ಕು; ಅದನ್ನು ಅನುಭವಿಸುವುದು ನಿಮ್ಮ ಕರ್ಮ/ ಕರ್ತವ್ಯ’ ಎಂಬ ಅಘೋಷಿತ ಸಾಮಾಜಿಕ ಆಚರಣೆ ಜಾರಿಯಲ್ಲಿದೆ. ದಮನ, ಅವಹೇಳನ ಮಾಡುತ್ತಿರುವವರೇ ಅವುಗಳ ಪರಿಹಾರಕ್ಕೆ ಕಾರ್ಯಸೂಚಿಯನ್ನೂ ಕೊಡುತ್ತಿದ್ದಾರೆ.

೫. `ಮತಾಂತರ’ವು ಎರಡು ಆಯಾಮಗಳಿಂದ ಪ್ರೇರಿತವಾಗಬಹುದು.
ಒಂದು: ಒಳಗಿನ ಒತ್ತಡ, ಎರಡು: ಹೊರಗಿನ ಪ್ರಭಾವ.
ಒಂದು:
ಅವಹೇಳನ ಮತ್ತು ಅಪಮಾನಗಳ ನೋವುಂಡವರು ತಮ್ಮ ಒಳಗಿನಿಂದಲೇ ಯಾವುದಾದರೂ ದಾರಿ ಹುಡುಕಬಹುದು. ಅಂತಹ ದಾರಿಗಳು ಕೇವಲ ಜಾತಿ, ಮತ ಹಾಗೂ ಧರ್ಮದ ಚೌಕಟ್ಟಿನಲ್ಲಿ ಮಾತ್ರ ಇರುವುದಿಲ್ಲ. ದುಡಿಮೆ, ಉತ್ಪಾದನೆ, ಉದ್ಯೋಗ ಇತ್ಯಾದಿಗಳ ಹೊಸ ಹುಡುಕಾಟವೂ ಇರಬಹುದು. ಶೋಷಿತ ಸಮುದಾಯಗಳ ಇತ್ತೀಚಿನ ತಲೆಮಾರು ತಮ್ಮ ಊರು/ಕೇರಿಗಳಿಂದ ಹೊರಗೆ ಹೋಗುತ್ತಿರುವುದು ಕೇವಲ ಕೂಲಿಗಾಗಿ ಮಾತ್ರ ಎಂದು ಸರಳೀಕರಿಸುವಂತಿಲ್ಲ. ಭೂಮಾಲಿಕತ್ವದ ಹೊಸ ಕ್ರೌರ್ಯಗಳು ಇವರನ್ನು ದಮನಿಸುತ್ತಿರುವ ಬಗ್ಗೆ ಹೆಚ್ಚಿನ ಅರಿವು ಬೇಕಾಗಿದೆ.

ಎರಡು:
ಶೋಷಣೆ ಮತ್ತು ಅಪಮಾನಗಳನ್ನು ಪ್ರತ್ಯೇಕಿಸಲು ಬರುವುದಿಲ್ಲ. ಪ್ರಭುತ್ವ ಮತ್ತು ಅದರ ಏಜೆನ್ಸಿಗಳು ಅಥವ ಪ್ರಭುತ್ವ ತಾನೇ (ಸಾಮ್ರಾಜ್ಯಶಾಹಿಗೆ) ಏಜೆನ್ಸಿಯಾಗಿ ಇವೆರಡೂ ಪ್ರತ್ಯೇಕವೆಂದು ನಂಬಿಸುತ್ತದೆ. ಹಾಗೆ ನಂಬಿಸಿ ಕೇವಲ ಅಪಮಾನವನ್ನು ಮಾತ್ರ ಪರಿಗಣಿಸಿ, `ಸಾಮಾಜಿಕ ಸ್ಥಾನಮಾನ’ ಎಂಬ ವೇಷದಲ್ಲಿ `ಮತಾಂತರ ಆಗುವಂತೆ’ ಹೊರಗಿನಿಂದ ಪ್ರಭಾವಿಸಲೂಬಹುದು. ಸಾಮ್ರಾಜ್ಯಶಾಹಿ ತನ್ನ ತಂತ್ರ ಹಾಗೂ ಹಿತಾಸಕ್ತಿಗಳನ್ನು ಸಾಮಾಜಿಕ ಚಳುವಳಿ ಹಾಗೂ ಎನ್‌ಜಿ‌ಓಗಳ ಮೂಲಕ ಪೂರೈಸಿಕೊಳ್ಳುತ್ತಿದೆ. ಇದರ ಉದ್ದೇಶ ಖಚಿತ ಮತ್ತು ಸ್ಪಷ್ಟ. ಶೋಷಿತರ ಪ್ರಾಥಮಿಕ ಅಗತ್ಯವಾದ ಆರ್ಥಿಕ ಬೇಡಿಕೆಯನ್ನು/ ಸಮಸ್ಯೆಯನ್ನು ಮುಚ್ಚಿಡುವುದು. ಅದರ ಜಾಗದಲ್ಲಿ ಮತ, ಧರ್ಮ, ಸಂಸ್ಕೃತಿಯ ವಿಷಯಗಳನ್ನು ತಂದು ಇವೇ ಮುಖ್ಯ ಎಂದು ನಂಬಿಸುವುದು. ವರ್ಗಾಂತರವನ್ನು ಮುಚ್ಚಿಟ್ಟು ಮತಾಂತರವನ್ನು ಮುಂದು ಮಾಡುವುದು. ಮೂಲ ಅಗತ್ಯಗಳ ಹಂಚಿಕೆಯಲ್ಲಿ ಮಾಡಲಾಗಿರುವ ಅನ್ಯಾಯ ಹಾಗೂ ಅದರ ಪರ್ಯಾಯದ ಬಗ್ಗೆ ಆಲೋಚಿಸದಂತೆ ಮಾಡುವುದು. ಜೊತೆಗೆ ಶೋಷಣೆಯ ವ್ಯವಸ್ಥೆಗೆ ಹೊಂದಿಕೊಂಡು ಹೋಗುವಂತಹ ಪ್ರಜ್ಞೆಯನ್ನು ರೂಪಿಸಲು ಪ್ರಯತ್ನಿಸುವುದು. ಹೊರಗಿನ ಪ್ರಭಾವವನ್ನೇ ಸಮುದಾಯಗಳು ತಮ್ಮ ಒಳಗಿನ ಒತ್ತಡವೆಂದು ನಂಬುವಂತೆ ಮಾಡುವುದು.

೬. ಮತಾಂತರ:
ಎ) ಉಪಶಮನವೊ, ಬಿ) ದಾರಿಯೊ, ಸಿ) ಗುರಿಯೊ
ಈ ಮೂರಕ್ಕೂ ಸ್ಪಷ್ಟ ವ್ಯತ್ಯಾಸಗಳಿವೆ. ಎ) ಉಪಶಮನ ಮೇಲುಸ್ತರದ್ದು, ತಾತ್ಕಾಲಿಕವಾದುದು. ಎರಡನೇ ಇಲ್ಲವೆ ಮೂರನೇ ಆದ್ಯತೆಯದು. ಮೊದಲನೇ ಆದ್ಯತೆಯದಂತೂ ಅಲ್ಲವೇ ಅಲ್ಲ. ಹಾಗಾಗಿ ಅದು ಮೊದಲನೇ ಆದ್ಯತೆಯನ್ನು ನಯವಾಗಿ ಮುಚ್ಚಿಡಲು ಕಾರಣವಾಗುತ್ತದೆ. ಲಕ್ಷಣವನ್ನೇ ಕಾರಣವೆಂದು ತಿಳಿಯುತ್ತದೆ.
ಬಿ) ದಾರಿಯು ಗುರಿ ಮುಟ್ಟಲು ಆಯ್ಕೆ ಮಾಡಿಕೊಳ್ಳುವ ವಿಧಾನವಾಗಿದೆ. ಗುರಿ ಮುಟ್ಟಲು ದಾರಿ/ ವಿಧಾನ ಬಹಳ ಮುಖ್ಯ. ಇದನ್ನು ಅವಗಣನೆ ಮಾಡಿದರೆ ಗುರಿ ಮುಟ್ಟಲು ಸಾಧ್ಯವಿಲ್ಲ. ಪರಿಸ್ಥಿತಿ ಬದಲಾದಂತೆ ದಾರಿಯನ್ನು ಬದಲಾಯಿಸಿ ಕೊಳ್ಳಬೇಕಾಗುತ್ತದೆ. ಅಥವಾ ಬದಲಾದ ಪರಿಸ್ಥಿತಿಯೇ ದಾರಿಯನ್ನು ರೂಪಿಸುತ್ತದೆ, ನಿರ್ಧರಿಸುತ್ತದೆ. ಬದಲಾದ ಪರಿಸ್ಥಿತಿಯನ್ನು ತಪ್ಪಾಗಿ ತಿಳಿದಾಗ, ತಪ್ಪು ದಾರಿ/ ತಪ್ಪು ವಿಧಾನವನ್ನು ಹಿಡಿದು, ಅದನ್ನೇ ಸರಿ ಎಂದು ನಂಬಲಾಗುತ್ತದೆ. ಆದರೆ ದಾರಿಯನ್ನೇ ಗುರಿ ಎಂದು ತಿಳಿಯಬಾರದು. `ಮತಾಂತರ’ಕ್ಕೆ ಕಾರಣವನ್ನು ಕೇವಲ ಮತಧರ್ಮಗಳ ವ್ಯಾಪ್ತಿಯಲ್ಲಿ ಮಾತ್ರ ಗುರುತಿಸಲಾಗಿದ್ದು, ಅದೇ ಸೀಮಿತ ನೆಲೆಯಲ್ಲಿ ಮಾತ್ರ ಅದರ ದಾರಿಯನ್ನು ರೂಪಿಸಲಾಗಿದೆ. ಈ ದಾರಿಯು ರಾಜಕೀಯ ಮತ್ತು ಆರ್ಥಿಕ ಪ್ರಶ್ನೆಯನ್ನು ಬದಿಗಿಡುವಂತೆ ಮಾಡಿದೆ.
ಸಿ) ಅನುಸರಿಸುವ ಸರಿಯಾದ ದಾರಿಯಿಂದಲೇ ಗುರಿಯು ಸಾಧ್ಯವಾಗುತ್ತದೆ. ಗುರಿ ಮುಟ್ಟಿದ ಮೇಲೆ ಸಾಗಿ ಬಂದ ದಾರಿ ಸಂಪೂರ್ಣ ವಿಸರ್ಜನೆಗೊಂಡು ಗುರಿ ಮಾತ್ರ ಉಳಿಯುತ್ತದೊ ಅಥವ ಸಾಧಿಸಿದ ಗುರಿಯನ್ನು ಉಳಿಸಲು/ ಮುಂದುವರಿಸಲು ಮತ್ತೆ (ಹೊಸ) ದಾರಿಗಳನ್ನು ಕಂಡುಕೊಳ್ಳಬೇಕೊ ಎಂಬ ಹೊಸ ಪ್ರಶ್ನೆಗಳು ಎದುರಾಗುತ್ತವೆ. ಸಧ್ಯ `ಮತಾಂತರ’ವನ್ನು ಗುರಿ ಎಂದೇ ಭಾವಿಸುವಂತೆ ಮಾಡಲಾಗಿದೆ. ಆದರೆ ಅದರ ನಿಜವಾದ ವಸ್ತುಸ್ಥಿತಿ ಮಾತ್ರ ಕೇವಲ ಉಪಶಮನದ ಹಂತದಲ್ಲಿದೆ. ಹಾಗಾಗಿಯೇ ಮತಾಂತರದ ನಂತರ ಅಲ್ಲಿ ಹೊಸ ಸಮಸ್ಯೆಗಳು ಸೃಷ್ಟಿಯಾಗಿವೆ. ಅವುಗಳನ್ನು ಎದುರಿಸಲು ಮತ್ತೆ ಹೊಸ ದಾರಿಗಳ, ಹೊಸ ಗುರಿಯ ಅವಶ್ಯಕತೆ ಇದೆ.

೭. ಮತಾಂತರ: ವಿರೋಧ ಯಾಕೆ?
ಮತಾಂತರವನ್ನು ಸಮರ್ಥಿಸಿ ಬೆಳೆಯುತ್ತಿರುವ ಸಾಹಿತ್ಯವು ಊಳಿಗಮಾನ್ಯಶಾಹಿಯನ್ನು ಮುಚ್ಚಿಟ್ಟು ವರ್ಣ ಅಸಮಾನತೆಯನ್ನು ದಾಖಲಿಸುತ್ತಿದೆ. ಅಸ್ಪೃಶ್ಯತೆ ಮತ್ತು ಜಾತಿ ಅಪಮಾನವನ್ನು ದಿನನಿತ್ಯ ಕಾಪಾಡುತ್ತಿರುವವರು ಮಧ್ಯಮ ಜಾತಿಯವರು/ ಊಳಿಗಮಾನ್ಯಶಾಹಿ. ಅವರು ಮತಾಂತರದ ಬಗ್ಗೆ ಬಹಿರಂಗ ವಿರೋಧ ಮಾಡುತ್ತಿಲ್ಲ. ಊಳಿಗಮಾನ್ಯಶಾಹಿಯ ಈ ನಿಲುವಿನ ಬಗೆಗೆ ನಮಗಿನ್ನೂ ಹೆಚ್ಚಿನ ಅರಿವು ಬೇಕಾಗಿದೆ. ಆದರೆ ಅಸ್ಪೃಶ್ಯತೆ ಮತ್ತು ಜಾತಿ ಅಪಮಾನವನ್ನು ನೇರ ಹಾಗೂ ಪ್ರತ್ಯಕ್ಷ ರೂಪದಲ್ಲಿ ಕಾಪಾಡದಿರುವವರು `ಮತಾಂತರ’ವನ್ನು ವಿರೋಧಿಸುತ್ತಿರುವುದು, `ಮತಾಂತರ’ ಎಂಬ ಸಾಮಾಜಿಕ ಕ್ರಿಯೆಗಿಂತ ಹೆಚ್ಚಾಗಿ ಅದರ ಒಡಲೊಳಗಿಂದ ಹುಟ್ಟುತ್ತಿರುವ ವರ್ಣ ವಿರೋಧದ ಆಲೋಚನ ಕ್ರಮದ ಬಗೆಗಿನ ಆತಂಕದಿಂದ ಎಂದು ಕಾಣುತ್ತದೆ.

೮. ಮತಾಂತರ: ಚರ್ಚೆಗೆ ಬೇಕಾದ ಚೌಕಟ್ಟು
ಶೋಷಿತರ ಬದುಕುವ ಹಕ್ಕನ್ನೇ ಕಿತ್ತುಕೊಂಡಿರುವ ಸಾಮ್ರಾಜ್ಯಶಾಹಿಯ ಹೊಸರೂಪದ ಸುಲಿಗೆಯ ವಿಧಾನಗಳು, ಇವುಗಳೊಂದಿಗೆ ಕೈಜೋಡಿಸಿರುವ ಊಳಿಗಮಾನ್ಯಶಾಹಿಯ ಬದಲಾದ ರೂಪ ಹಾಗೂ ಪ್ರಭುತ್ವ ಇವುಗಳ ವಿಶಾಲವಾದ ಚೌಕಟ್ಟಿನಲ್ಲಿ, `ಮತಾಂತರ’ವನ್ನು ಕುರಿತು ಚರ್ಚಿಸಬೇಕಾಗಿದೆ.

No comments: