Saturday, November 22, 2008

ಮತಾಂತರ ಒಂದು ಚರ್ಚೆ

ಮತಾಂತರ: ಚರ್ಚೆಗೆ ನೆರವಾಗಲು ಒಂದು ಟಿಪ್ಪಣಿ

ಪ್ರಶ್ನೆಗಳು:

೧. ಮತಾಂತರ ಯಾರ ಪ್ರಶ್ನೆ?

ಈಗ ಮತಾಂತರವನ್ನು ಕುರಿತು ಬರೆಯುತ್ತಿರುವವರು ಮಾತನಾಡುತ್ತಿರುವವರು'ಸಂಚಿ'ನ ಮಾದರಿಯಲ್ಲಿ ತಮ್ಮ ಗ್ರಹಿಕೆಗಳನ್ನು ಮಂಡಿಸುತ್ತಿದ್ದಾರೆ. ಅಂತಾರಾಷ್ಟ್ರೀಯ ನೆಲೆಯ ಸಂಚಿನ ಭಾಗವಾಗಿ 'ನಮ್ಮ' ಸಮಾಜವನ್ನು 'ಒಡೆದು' ಆಳಲು ಮತಾಂತರವನ್ನು ಒಂದು ತಂತ್ರವಾಗಿ ಬಳಸಲಾಗುತ್ತಿದೆ ಎಂದು ವಿವರಿಸುತ್ತಿದ್ದಾರೆ.

ಈ ವಾದವನ್ನು ಮಂಡಿಸುತ್ತಿರುವವರ ಗ್ರಹಿಕೆಯಂತೆಯೇ ನೋಡಿದರೆ ಯಾರು ಮತಾಂತರಗೊಳ್ಳುತ್ತಿದ್ದಾರೆ ಎಂಬ ಪ್ರಶ್ನೆ ಕುತೂಹಲಕಾರಿಯಾದುದು. ವೈಯುಕ್ತಿಕ ನೆಲೆಯ ಪಲ್ಲಟಗಳನ್ನು ಹೊರತು ಪಡಿಸಿದರೆ ಸಾಮೂಹಿಕವಾಗಿ 'ನಡೆಯುತ್ತಿರುವ' ಮತಾಂತರಗಳಲ್ಲಿ 'ಭಾಗಿ'ಯಾಗುತ್ತಿರುವವರು ಸಮಾಜದ ಅಂಚಿನಲ್ಲಿರುವವರು. ಇವರು ಅ). ಮತಾಂತರವನ್ನು ತಮ್ಮ ಆಯ್ಕೆ ಎಂದು ತಿಳಿದವರಾಗಿರಬಹುದು; ಇಲ್ಲವೇ ಆ) ಇತರರು ಹೇಳುವಂತೆ 'ಬಲಿಪಶು'ಗಳಾಗಿರಬಹುದು.ಇವರಲ್ಲಿ ಮೊದಲಿನವರು ಮತಾಂತರ ಏಕೆ ತಮ್ಮ ಆಯ್ಕೆ ಎಂಬ ಬಗೆಗೆ ತಮ್ಮ ನಿಲುವನ್ನು ಮಂಡಿಸುತ್ತಿದ್ದಾರೆ. ಎರಡನೆಯ ಗುಂಪಿನವರ ಬಗೆಗೆ ಇತರರು ತಮ್ಮ ನಿಲುವನ್ನು ಮಂಡಿಸುತ್ತಿದ್ದಾರೆ.

ಯಾವುದೇ ಸಾಮೂಹಿಕ ಆಯ್ಕೆಯ ಹಿಂದೆ ವ್ಯಕ್ತಿಗತ ನಿರ್ಧಾರಗಳು ಮುಖ್ಯವಾಗುವುದಿಲ್ಲ. ಅಂತಹ ಸಾಮೂಹಿಕ ಚಲನೆಯ ಹಿಂದೆ ಹಲವು ಒತ್ತಡಗಳು ಇದ್ದೇ ಇರುತ್ತವೆ. ಅದು ಪ್ರಚಾರವಿರಬಹುದು; ಪ್ರೇರಣೆ ಇರಬಹುದು. ಇಲ್ಲವೇ ಮತ್ತಾವುದೇ ಕಟ್ಟು ಇರಬಹುದು. ಸಮುದಾಯ ಇಲ್ಲವೇ ಅದರ ಭಾಗ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅದಕ್ಕೆ ಕೊಡುವ ಕಾರಣಗಳಿಗೂ ಆ ನಿರ್ಧಾರದ ಪರಿಣಾಮಗಳಿಗೂ ನೇರವಾದ ಸಂಬಂಧ ಇರಲೇ ಬೇಕೆಂಬ ನಿಯಮಗಳಿಲ್ಲ. ಉದಾಹರಣೆಗೆ ಇಂಡಿಯಾದ ದಲಿತರು ಇಲ್ಲವೇ ಅವರಲ್ಲಿನ ಒಂದು ಗುಂಪು ಬೌದ್ಧಧರ್ಮಕ್ಕೆ ಸೇರ್ಪಡೆಯಾಗುವ ನಿರ್ಣಯವನ್ನು ತೆಗೆದುಕೊಂಡರೆ ಆ ನಿರ್ಣಯದ ಹಿಂದೆ ತಮ್ಮ ಸಾಮಾಜಿಕ ಪರಿಸ್ಥಿತಿಯಿಂದ ಹೊರಬರುವ ಇರಾದೆ ಕೆಲಸ ಮಾಡುತ್ತಿರುತ್ತದೆ. ಇದನ್ನವರು ಸ್ಪಷ್ಟವಾದ ಮಾತುಗಳಲ್ಲಿ ಹೇಳುತ್ತಿರುತ್ತಾರೆ ಕೂಡ. ಆದರೆ ಈ ಪರಿವರ್ತನೆಯ ಪರಿಣಾಮ ಅವರು ಬೌದ್ಧರಾಗಿ ತಮ್ಮ ಜೀವನ ಕ್ರಮವನ್ನು ಬದಲಾಯಿಸಿಕೊಂಡಿದ್ದಾರೆ ಎಂದಲ್ಲ. ಇಂತಹ ಪರಿವರ್ತನೆಗಳ ಪರಿಣಾಮ ಬೇರೇನೋ ಆಗಿರಲು ಸಾಧ್ಯವಿದೆ.

ಇದೇ ಪರಿಸ್ಥಿತಿ 'ಗೊತ್ತಿಲ್ಲದೆ' ಮತಾಂತರಗೊಳ್ಳುವವರಲ್ಲೂ ಕಾಣುತ್ತದೆ. ಅವರು 'ಇನ್ನೊಂದು' ಧರ್ಮಕ್ಕೆ ಬದಲಾಗಲು ಇರುವ ಕಾರಣಗಳನ್ನು ಕೇವಲ ಅವರ ಮೇಲೆ ಮಂಕುಬೂದಿ ಎರಚುವವರಲ್ಲಿ ಹುಡುಕುವ ಯತ್ನ ಸರಿಯಲ್ಲ. ಹೀಗೆ 'ಮಂಕುಬೂದಿ' ಎರಚುವ ಪರಿಸ್ಥಿತಿ ಏಕೆ ಉಂಟಾಗಿದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಬದುಕಿನ 'ಬೇಕು'ಗಳಿಂದ ಹೊರಗುಳಿದವರಿಗೆ ಅದು ಸಿಗುವ ಯಾವ ಹಾದಿಯಾದರೂ ಒಂದು ಸೆಳೆತವಾಗಿಯೇ ಕಾಣುತ್ತದೆ. ಅದರಲ್ಲೂ ಆಹಾರ,ಆರೋಗ್ಯ,ವಸತಿ ಇವುಗಳ ಹುಡುಕಾಟದಲ್ಲಿರುವವರಿಗೆ ಅದು ಸಿಗುತ್ತದೆ ಎಂಬ ನಂಬಿಕೆ ಒಂದು ಸೆಳೆತವೇ ಆಗಿಬಿಡುತ್ತದೆ. ಅವರ ನಿರ್ಗತಿಕತೆಯನ್ನು 'ಪ್ರಚಾರಕರು' ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂಬ ತರ್ಕ ಹೂಡುವವರು ಈ ನಿರ್ಗತಿಕತೆಗೆ ಕಾರಣಗಳನ್ನು ಮತ್ತು ಅದರ ಪರಿಹಾರಕ್ಕೆ ಹೂಡಿದ ಕಾರ್ಯಯೋಜನೆಗಳನ್ನು ಕುರಿತು ಚಿಂತಿಸುವುದು ಅಗತ್ಯವಲ್ಲವೇ?

೨. ಮತಾಂತರ ಒಂದು ಆರ್ಥಿಕ ಸಾಮಾಜಿಕ ನೆಲೆಯ ಪ್ರಕ್ರಿಯೆ. ಇದು ನಾವು ಆಯ್ದುಕೊಂಡ ಅಭಿವೃದ್ಧಿಯ ಮಾದರಿಯ ಪರಿಣಾಮವೂ ಹೌದು. ನಮ್ಮ ಅಭಿವೃದ್ಧಿಯ ಮಾದರಿಯಲ್ಲಿ 'ಒಳಗೊಳ್ಳುವ' ನೆಲೆಗಳಿಗಿಂತ 'ಹೊರಗಿಡುವ' ನೆಲೆಗಳು ಬಲಶಾಲಿಯಾಗಿವೆ. ರಾಜಕೀಯ ಸಮಾನತೆಯನ್ನು ಒಬ್ಬರಿಗೆ ಒಂದು ಓಟು ಎಂಬುದರಿಂದ ನಿರ್ಧರಿಸಿದ್ದೇವೆ. ಆದರೆ ಆರ್ಥಿಕ ಮತ್ತು ಸಾಮಾಜಿಕ ಸಮಾನತೆಗಳು 'ಸಾಧಿಸ'ಬೇಕಾದ ಗುರಿಗಳಾಗಿವೆ. ಈ ಹಾದಿಯಲ್ಲಿ ಸಮಬಲಗಳ ನಡುವೆ ಓಟ ಏರ್ಪಟ್ಟಿಲ್ಲ; ಅಸಮಾನತೆಯನ್ನು ಬಳಸುದಾರಿಯಿಂದ ಕಾಯ್ದುಕೊಂಡು ಹೋಗುವ ಮಾದರಿಯೇ ನೆಲೆಗೊಂಡಿದೆ. ಇದರಲ್ಲಿ ಪಾರಂಪರಿಕವಾಗಿ 'ಹೊರಗುಳಿದಿದ್ದವರ' ಜೊತೆಗೆ ಈ ಪ್ರಕ್ರಿಯೆಯಿಂದಾಗಿ 'ಹೊರಗುಳಿಯಬೇಕಾಗಿ'ಬಂದವರು ಸೇರಿಕೊಂಡಿದ್ದಾರೆ.

ಮೊದಲಗುಂಪಿನಲ್ಲಿ ಬುಡಕಟ್ಟುಜನರು,ದಲಿತರು ಇದ್ದರೆ ಎರಡನೆಯ ಗುಂಪಿನಲ್ಲಿ ತಮ್ಮ ಪಾರಂಪರಿಕ ಕೌಶಲ್ಯಗಳು ಹೊಸ ಜಗತ್ತಿನಲ್ಲಿ ನಿರುಪಯುಕ್ತಗೊಂಡದ್ದರಿಂದಲೇ ಅಸಹಾಯಕರಾದ ಜನ ಸಮುದಾಯವಿದೆ. ಮತಾಂತರವೆಂಬುದು ಈ ಕಾರಣಗಳಿಂದ ಬೆಳೆದು ನಿಂತ ಸಮುದಾಯದಲ್ಲಿ ನಡೆಯುತ್ತಿರುವ ಚಟುವಟಿಕೆಯಾಗಿದೆ. ಇದು ತಮ್ಮ 'ಅಂಚಿನ ಸಮಾಜದ' ನಿರ್ಗತಿಕತೆಯಿಂದ ಹೊರಬರಲು ನಡೆಸುತ್ತಿರುವ ಯತ್ನವಾಗಿ ತೋರುತ್ತಿದೆ. ಇದು ಫಲಕಾರಿಯೋ ಅಲ್ಲವೋ ಎನ್ನುವುದು ಮುಖ್ಯವಲ್ಲ. ಹೀಗಾಗಲು ಕಾರಣಗಳೇನು ಎಂಬುದನ್ನು ನಾವು ಮೊದಲು ಗ್ರಹಿಸದಿದ್ದಲ್ಲಿ ತಪ್ಪು ವಿಶ್ಲೇಷಣೆಯಲ್ಲಿ ಮಗ್ನರಾಗುತ್ತೇವೆ.

೩. ಈ ಚರ್ಚೆ ಈಗ ನಡೆಯುತ್ತಿರುವ ಬಗೆ ಏನನ್ನು ಸೂಚಿಸುತ್ತಿದೆ?

ಮತಾಂತರದ ಪ್ರಶ್ನೆಯನ್ನು ಚಾರಿತ್ರಿಕವಾಗಿ ನೋಡಬಹುದು;ಜಾಗತಿಕವಾಗಿ ನೋಡಬಹುದು ಮತ್ತು ಸಮಕಾಲೀನ ವಿದ್ಯಮಾನವಾಗಿಯೂ ನೊಡಬಹುದು. ಯಾವ ನಿಟ್ಟಿನಲ್ಲಿ ಈ ಪ್ರಶ್ನೆಯನ್ನು ಚರ್ಚಿಸುತ್ತಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಆಗತ್ಯ. ಏಕೆಂದರೆ ಒಂದು ನೆಲೆಯಲ್ಲಿ ಬಳಸುವ ಪರಿಕರಗಳನ್ನು ಇನ್ನೊಂದು ನೆಲೆಯಲ್ಲಿ ಬಳಸುವುದು ತಪ್ಪಾಗುತ್ತದೆ. ಉದಾ.ಗೆ. ಸ್ವಾತಂತ್ರ್ಯ ಪೂರ್ವದಲ್ಲಿ ನಡೆಯುತ್ತಿದ್ದ ಮತಾಂತರಗಳ ಒಂದು ಲಕ್ಷಣ ಈಗಿನ ಮತಾಂತರಗಳಲ್ಲಿ ಕಾಣುವುದಿಲ್ಲ. ಊಳಿಗಮಾನ್ಯ ವ್ಯವಸ್ಥೆಯಲ್ಲಿ ಯಜಮಾನನ ಮತಾಂತರದ ಮೂಲಕ ಇಡೀ ಸಮುದಾಯವನ್ನು ಬದಲಿಸುವ ತಂತ್ರವನ್ನು ಬಳಸಿದ್ದನ್ನು ನೋಡುತ್ತೇವೆ. ಮಧ್ಯಕಾಲೀನ ಕರ್ನಾಟಕದಲ್ಲಿ ಈ ಬಗೆ ಇದ್ದುದಕ್ಕೆ ಪುರಾವೆಗಳು ದೊರಕುತ್ತವೆ. ಆದರೆ ಈಗ ಈ ಮಾದರಿ ಕಾಣಸಿಗುತ್ತಿಲ್ಲ. ಆದ್ದರಿಂದ ಇಂದಿನ ಪ್ರಕ್ರಿಯೆಯನ್ನು ಚಾರಿತ್ರಿಕ ನೆಲೆಯ ನಿದರ್ಶನಗಳಿಂದ ವಿವರಿಸಲು ಆಗುವುದಿಲ್ಲ.

ಈಗ ಈ ಪ್ರಶ್ನೆಯನ್ನು ಮುಂಚೂಣಿಗೆ ತರುತ್ತಿರುವುವವರು ಯಾರು? ಮೊದಲೇ ಹೇಳಿದಂತೆ ಮತಾಂತರದ 'ಖೆಡ್ಡ'ಕ್ಕೆ ಬಿದ್ದವರೂ ಅಲ್ಲ; ಅದನ್ನು ಒಂದು ಹೊರದಾರಿ ಎಂದು ಕಂಡುಕೊಂಡವರೂ ಅಲ್ಲ. ಹೊಸ ಆರ್ಥಿಕ ವ್ಯವಸ್ಥೆಯ ಬಿಕ್ಕಟ್ಟುಗಳಿಂದಾಗಿ ಸಾಂಪ್ರದಾಯಿಕ ಯಾಜಮಾನ್ಯಕ್ಕೆ ಕೊಡಲಿಯೇಟು ಬಿದ್ದಿರುವುದಂತೂ ನಿಜ. ಅಂದರೆ ಹೊಸ ಗುರುತುಗಳು ಈಗ ಮುಂಚೂಣಿಗೆ ಬಂದಿವೆ. ಉಳ್ಳವರು ಜಾಗತಿಕ ಮಟ್ಟದ ಸಂಪರ್ಕ ಜಾಲದಲ್ಲಿ ತಮ್ಮ ಗುರುತುಗಳನ್ನು ಕಂಡುಕೊಳ್ಳ ತೊಡಗಿರುವುದು ಎದ್ದು ಕಾಣುತ್ತಿರುವ ಸಂಗತಿ. ಇದರ ಪ್ರತಿರೋಧವಾಗಿ 'ಅಂಚಿನ ಸಮುದಾಯ'ಗಳು ಕೂಡ ಜಾಗತಿಕ ನೆಲೆಯ ಸಂಪರ್ಕಜಾಲದೊಳಗೆ ತಮ್ಮನ್ನು ತಾವು ಸೇರಿಸಿಕೊಳ್ಳುವುದು ಅನಿವಾರ್ಯವಾಗಿದೆ. ದಲಿತರ ಪ್ರಶ್ನೆಯನ್ನು ವರ್ಣಭೇದ ಪ್ರಶ್ನೆಯೊಂದಿಗೆ ಜೋಡಿಸಿ ಅದನ್ನು ಮಾನವ ಹಕ್ಕುಗಳ ಚರ್ಚಿಸಬೇಕೆಂಬ ಕರೆ ಇಂತಹ ಪ್ರಕ್ರಿಯೆಯ ಪರಿಣಾಮವೇ ಆಗಿದೆ. ಇದು ವೈರುದ್ಧ್ಯ ಪ್ರಕಟಗೊಳ್ಳುವ ರೀತಿಯೇ ಹೊರತು ವೈರುದ್ಧ್ಯ ಪರಿಹಾರಗೊಳ್ಳುವ ಬಗೆಯಲ್ಲ. ಆದರೂ ಈ ಹೊಸ ಗುರುತಿಗಾಗಿ ನಡೆಸಿರುವ ಪ್ರಯತ್ನಗಳು ಸಾಂಪ್ರದಾಯಿಕ ನೆಲೆಗಳಿಗೆ ಆತಂಕವನ್ನು ತಂದಿವೆ. ಈ ಸಂಪರ್ಕ ಜಾಲ ನಿರ್ಮಾಣ ತರಬಹುದಾದ ಹೊಸ ಸವಾಲುಗಳನ್ನು ನಿವಾರಿಸಿಕೊಳ್ಳಲು ಮತಾಂತರವನ್ನು ಕುರಿತ ಇಂತಹ ಚರ್ಚೆಗಳನ್ನು ಹುಟ್ಟುಹಾಕಲಾಗುತ್ತಿದೆ.

೪. ಮತಾಂತರದ ಪರ ಇಲ್ಲವೇ ವಿರುದ್ಧ ಎಂಬ ನಿಲುವು ಸರಿಯಲ್ಲ. ಇವೆರಡೂ ನಮ್ಮನ್ನು ದಿಟವನ್ನು ಅರಿಯಲು ನೆರವಾಗುವುದಿಲ್ಲ. ಬುದ್ಧಿಯನ್ನು ಬಳಸಿ ಯಾವುದೇ ಪಕ್ಷದ ವಾದವನ್ನು ಸಮರ್ಥಿಸಲೂ ಬಹುದು ಹಾಗೆಯೇ ಖಂಡಿಸಲೂ ಬಹುದು. ಆದರೆ ಇದು ಕುರುಹುಗಳನ್ನು ಹಿಡಿದು ನಡೆಸುವ ವಾಗ್ವಾದವಾಗಿದೆ. ಇಲ್ಲಿ ಮಾತಿಗೆ ಪ್ರಾಧಾನ್ಯ ಒದಗಿಬಿಡುತ್ತದೆ. ಕಾಣುವ ಕುರುಹುಗಳನ್ನು ಬೆಳೆಸಿದ ಮೂಲವನ್ನು ಹುಡುಕಿ ಅಲ್ಲಿಂದ ಮೊದಲು ಮಾಡಬೇಕಿದೆ. ಇಂತಹ ಚರ್ಚೆಗಳಿಗೆ ಇನ್ನೊಂದು ಉದ್ದೇಶವೂ ಇರುತ್ತದೆ. ಅದು ದುರ್ಬಲರಲ್ಲಿ ಅಭದ್ರತೆಯ ಭಾವನೆಯನ್ನು ಮೂಡಿಸುವುದು. ಸ್ವಲ್ಪ ಮಟ್ಟಿಗೆ ಈ ಉದ್ದೇಶವನ್ನು ಸಾಧಿಸುವಲ್ಲಿ ಈ ವಾಗ್ವಾದಗಳು ಗೆಲುವನ್ನು ಪಡೆಯಲೂ ಬಹುದು. ಆದರೆ ಪರಿಸ್ಥಿತಿಯಲ್ಲಿ ಬದಲಾವಣೆಯನ್ನು ತರಲಾರದು.

೫. ಇನ್ನೂ ಒಂದು ದಿಕ್ಕಿನಿಂದ ಈ ಪ್ರಶ್ನೆಯನ್ನು ಅರಿತುಕೊಳ್ಳಲು ಸಾಧ್ಯವಿದೆ.ಗತಿತಾರ್ಕಿಕತೆಯ ನೆಲೆಯಿಂದ ನೋಡಿದರೆ ಈಗ ಮತಾಂತರ ಒಂದು ಕಿರು ವೈರುದ್ಧ್ಯ. ಇದಕ್ಕೂ ಮುಖ್ಯವಾದ ಹಿರಿ ವೈರುದ್ಧ್ಯಗಳಿವೆ. ಅಧಿಕಾರಸ್ಥರು ಕೆಲವೊಮ್ಮೆ ಬೇಕೆಂತಲೇ ತಮ್ಮ ವಿಶ್ಲೇಷಣೆಯಲ್ಲಿ ಈ ವೈರುದ್ಧ್ಯಗಳ ಶ್ರೇಣಿಯಲ್ಲಿ ಅದಲು ಬದಲು ಮಾಡುತ್ತಾರೆ. ಆಗ ಕಿರು ವೈರುದ್ಧ್ಯವೇ ಮುಂಚೂಣಿಯಲ್ಲಿದೆಯೆಂಬ ಭ್ರಮೆಯನ್ನು ಮೂಡಿಸಲು ಸಾಧ್ಯ. ಆಗ ಸಮಾಜ ರಚನೆಯೊಳಗೆ ಇರುವ ವೈರುದ್ಧ್ಯಗಳ ನಡುವಣ ಶತ್ರುತ್ವವನ್ನು ಮರೆಮಾಚಲು ಸಾಧ್ಯವಾಗುತ್ತದೆ. ಕಳೆದ ಐದಾರು ದಶಕಗಳಿಂದ, ಜಾತಿ ವ್ಯವಸ್ಥೆಯ ಸ್ವರೂಪವನ್ನು ಗಮನಿಸಿದವರು ಈ ಸಮಾಜದ ಹಿರಿ ವೈರುದ್ಧ್ಯ ಇದೇ ಆಗಿದೆ ಎಂದು ಗುರುತಿಸಿದ್ದರು. ಈ ವಿಶ್ಲೇಷಣೆ ಸರಿಯೋ ತಪ್ಪೋ ಎಂಬುದು ಸದ್ಯ ಮುಖ್ಯವಲ್ಲ. ಆದರೆ ಇದರಿಂದ ಜಾತಿಗಳ ನಡುವೆ ಶ್ರೇಣೀಕರಣಕ್ಕಾಗಿ ಹೋರಾಟ ನಡೆಯುತ್ತಿದೆ ಎಂಬುದಂತೂ ನಿಜ. ಈಗ ಅಧಿಕಾರದ ಹಸ್ತಾಂತರ ಸನ್ನಿಹಿತವಾಗುತ್ತಿದೆ ಎಂಬ ಎಚ್ಚರಿಕೆಯ ಗಂಟೆ ಮೊಳಗ ತೊಡಗಿದೆ. ಇದನ್ನು ನಿವಾರಿಸಲು ಹೊರಗಿನ ಶತ್ರುವನ್ನು ಕಲ್ಪಿಸಿ ಮುಂದಿಡಲಾಗುತ್ತಿದೆ. ಇದರಿಂದ 'ನಾವೆಲ್ಲರೂ ಒಂದು' ಎಂಬ ಭಾವನೆಯನ್ನು ಗಟ್ಟಿಗೊಳಿಸಿ, ಯಾರೋ ಇದನ್ನು ಒಡೆಯಲು ಪ್ರಯತ್ನಿಸುತ್ತಿದ್ದಾರೆ ಎಂಬ ಭಯದ ವಾತಾವರಣವನ್ನು ಮೂಡಿಸುವುದು ಅಧಿಕಾರವುಳ್ಳವರ ಗುರಿಯಾಗಿದೆ.ಈಗ ಕಿರು ವೈರುದ್ಧ್ಯವನ್ನು ಮುಂಚೂಣಿಗೆ ತಂದು ಇರುವ ಶತ್ರುತ್ವ ಭಾವವನ್ನು ಮರೆಮಾಚುವುದೂ ಇಂತಹ ಚರ್ಚೆಗಳ ಗುರಿಯಾಗಿದೆ.

1 comment:

Masters said...

Dear Nalanda,
I liked your article on conversion.I some how taken up by your analysis on conversion. let this article reach many more
Vinod