Tuesday, February 26, 2008

2007ನೇ ಸಾಲಿನ ಡಾ.ಎಲ್.ಬಸವರಾಜು ಪ್ರಶಸ್ತಿ

ಡಾ.ಎಲ್.ಬಸವರಾಜು ಪ್ರತಿಷ್ಠಾನ (ರಿ), ಕೋಲಾರ ಇವರ 2007ನೇ ಸಾಲಿನ ಡಾ.ಎಲ್.ಬಸವರಾಜು ಪ್ರಶಸ್ತಿಯನ್ನು ನಾದ ಗಾರುಡಿ ತಮಟೆ ವಾದಕ ಶ್ರೀಯುತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ನೀಡಲಾಯಿತು. ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆದಿಮ, ಜಿಂಕೆ ರಾಮಯ್ಯ ಜೀವತಾಣ, ತೇರಹಳ್ಳಿ ಬೆಟ್ಟ, ಕೋಲಾರ ಇವರ ಸಹಯೋಗದೊಂದಿಗೆ ಜಿಂಕೆ ರಾಮಯ್ಯ ಜೀವತಾಣದಲ್ಲಿ 21-2-2008ರಂದು ಏರ್ಪಡಿಸಲಾಗಿತ್ತು.

ಜಿಂಕೆ ರಾಮಯ್ಯ ಜೀವತಾಣದಲ್ಲಿ ಕಂಡ ಸೂರ್ಯಾಸ್ತ.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿದ್ದ ಶ್ರೀಮತಿ ವಿಶಾಲಾಕ್ಷಿ ಬಸವರಾಜುವರು ಡಾ.ಎಲ್.ಬಸವರಾಜುರವರ `ಸೊನ್ನಲಾಪುರದ ಸಂತ ಸಿದ್ಧರಾಮನ ನಿಜವಚನಗಳು' ಕೃತಿಯನ್ನು ಬಿಡುಗಡೆ ಮಾಡಿದರು. ಆ ಕೃತಿಯ ಕುರಿತಾಗಿ ಪ್ರೊ.ಚಂದ್ರಶೇಖರ್ ನಂಗಲಿ ಮಾತನಾಡಿದರು.


ಶ್ರೀಯುತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರಿಗೆ ಪ್ರಶಸ್ತಿ ಪ್ರದಾನವನ್ನು ಖ್ಯಾತ ಚಿತ್ರ ಕಲಾವಿದ ಶ್ರೀ.ಕೆ.ಟಿ.ಶಿವಪ್ರಸಾದ್‌ರವರು ಮಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸಿ.ಎಲ್.ಗೌಡರವರು ವಹಿಸಿದ್ದರು. ಶ್ರೀ ರಾಮಲಿಂಗಪ್ಪ ಟಿ.ಬೇಗೂರ್‌ರವರು ಕಾರ್ಯಕ್ರಮ ನಿರ್ವಹಣೆ ಮಾಡಿದರು.


ಪ್ರಶಸ್ತಿ ಪ್ರದಾನ ಕಾರ್ಯಕ್ರಮದ ನಂತರ ಆದಿಮ ಹುಣ್ಣಿಮೆ ಹಾಡು-20 ಕಾರ್ಯಕ್ರಮದ ಅಂಗವಾಗಿ `ನಾಗಮಂಡಲ' ನಾಟಕ ಪ್ರದರ್ಶನ ಏರ್ಪಡಿಸಲಾಗಿತ್ತು. ನಿರ್ದೇಶನ- ಮೈಕೋ ಚಂದ್ರು, ತಂಡ- ಅನಂತರಾಮ್ ಮತ್ತು ಗೆಳೆಯರು, ಮೈಕೋ.ಫೋಟೋ ಮತ್ತು ವೀಡಿಯೋ: ಮಾಸ್ಟರ್ ಶಶಾಂಕ್ .ಆರ್.ಬಿ.

ನಾದ ಗಾರುಡಿ ಮುನಿವೆಂಕಟಪ್ಪನವರ ಪರಿಚಯ:


ನಾದ ಗಾರುಡಿ ಶ್ರೀಯುತ ಪಿಂಡಿಪಾಪನಹಳ್ಳಿ ಮುನಿವೆಂಕಟಪ್ಪನವರು ಈಗಿನ ಚಿಕ್ಕಬಳ್ಳಾಪುರ ಜಿಲ್ಲೆ ಶಿಡ್ಲಘಟ್ಟ ತಾಲ್ಲೂಕಿನ ಪಿಂಪಿಪಾಪನಹಳ್ಳಿಯ ಪಾಪಣ್ಣ-ಮುನಿಗಂಗಮ್ಮ ದಂಪತಿಗಳ ಸುಪುತ್ರರು. ಆ ಕಾಲದ ನೈಟ್ ಸ್ಕೂಲಿನಲ್ಲಿ ನಾಲ್ಕನೆಯ ತರಗತಿಯವರೆಗೆ ಮಾತ್ರ ವಿದ್ಯಾಭ್ಯಾಸ ಪಡೆದವರು. ತಂದೆ ಪಾಪಣ್ಣನವರು ತಮಟೆ ನುಡಿಸುವುದರಲ್ಲಿ ಹೆಸರಾದವರಾಗಿದ್ದರೂ ಅವರು ಬದುಕಿರುವವರೆಗೆ ಮುನಿವೆಂಕಟಪ್ಪನವರಿಗೆ ತಮಟೆ ಮುಟ್ಟಲು ಮನಸ್ಸಾಗಿರಲಿಲ್ಲ. ತಂದೆ ತೀರಿಕೊಂಡ ನಂತರ ಅದೂ ತಮ್ಮ ಹದಿನೇಳನೇ ವಯಸ್ಸಿನಲ್ಲಿ ತಮಟೆಯನ್ನು ಎದೆಗೇರಿಸಿದ್ದು ಹಾಗೂ ಎದೆ ದನಿಯನ್ನು ತಮಟೆ ದನಿಯಾಗಿಸಿದ್ದು. ಅಂದು ಎದೆಗೇರಿಸಿದ ತಮಟೆಯನ್ನು ಅವರು ಕೈಬಿಡಲಿಲ್ಲ; ತಮಟೆಯೂ ಅವರನ್ನು ಕೈಬಿಡಲಿಲ್ಲ.ಮುನಿವೆಂಕಟಪ್ಪನವರ ತಮಟೆಯ ನಾದವನ್ನು ಕೇಳಿ, ನೋಡಿ ಆನಂದಿಸಿ.

ಒಂದು ಕಾಲಕ್ಕೆ ಆದಿ ರುದ್ರನ ಆವಿಷ್ಕಾರವಾದ ತಮಟೆ ಮನುಕುಲದ ಸಂಕಟ ಸಂಭ್ರಮಗಳನ್ನು ನಾದ ನುಡಿಯಾಗಿಸುತ್ತಾ ಗೌರವಾರ್ಹ ಸ್ಥಾನದಲ್ಲಿತ್ತು. ಕ್ರಮೇಣ ಮೇಲು ಕೀಳಿನ ಮುಸುಕಿನ ಮರೆಯ ಕೈವಾಡದಿಂದಾಗಿ ಕಡೆಗೆ ದೂಡಲ್ಪಟ್ಟಿತು. ಸಮಾಜದ ಕಣ್ಣಿಗೆ ಕೀಳಾಗಿ ಹೋದ ಈ ತಮಟೆಯ ಆದಿಮ ಪರಂಪರೆಗೆ ಗೌರವದ ಸ್ಥಾನವನ್ನು ಮರಳಿ ದಕ್ಕಿಸಿಕೊಡುತ್ತಾ ಆ ಪರಂಪರೆಯನ್ನು ಮುನ್ನಡೆಸುತ್ತಾ ತಮಟೆಯಂತೆಯೇ ಕಡೆಗಣಿಸಲಾಗಿದ್ದ ಸಾಮಾಜಿಕ ಸ್ತರದಿಂದ ತಾವೂ ಎತ್ತರಕ್ಕೆ ಏರಿದವರು. ಹೀಗೆ ಕಡೆಗಣಿಸಲಾದ ನೆಲಸಂಸ್ಕೃತಿಯ ಸಂಗೋಪನೆಗಾಗಿ ಅಮೋಘ ಕೊಡುಗೆ ನೀಡಿರುವ ಶ್ರೀ ಮುನಿವೆಂಕಟಪ್ಪ ನಮ್ಮ ನಡುವಿನ ಅಪರೂಪದ ಸಾಧಕರು.

ಇವರ ಸಾಧನೆಯ ಹಿರಿಮೆಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಇವರನ್ನು ಹುಡುಕಿಕೊಂಡು ಬಂದಿವೆ. ಇವುಗಳಲ್ಲಿ ಮುಖ್ಯವಾದವು ರಾಜ್ಯೋತ್ಸವ ಪ್ರಶಸ್ತಿ (1992), ಜನಪದ ಲೋಕ ಪ್ರಶಸ್ತಿ (2000), ಡಾ.ಜೀಶಂಪ ಜನಪದ ಕಲಾವಿದ ಪ್ರಶಸ್ತಿ (2008) ಹಾಗೂ ಡಾ. ಅಂಬೇಡ್ಕರ್ ಪ್ರಶಸ್ತಿ. ಇದಲ್ಲದೆ ದೂರದ ಜಪಾನ್ ದೇಶವೂ ಇವರನ್ನು ತಮ್ಮ ನಾಡಿಗೆ ಬರಮಾಡಿಕೊಂಡು ಇವರ ತಮಟೆಯ ಸೊಲ್ಲು ಕೇಳಿ ಅಲ್ಲಾಡಿಹೋಗಿದೆ.

ತಮಟೆ ವಾದನವನ್ನೂ ಧ್ಯಾನದ ಮಟ್ಟಕ್ಕೆ ಏರಿಸಿ ನಾದಮಯಗೊಳಿಸಿರುವ ಆ ಮೂಲಕ ನೆಲ ಸಂಸ್ಕೃತಿಯ ಸಂಗೋಪನಾ ಕಾಯಕ ಮುಂದುವರೆಸುತ್ತಾ ಬಂದಿರುವ ನಾದ ಕಾಯಕಿ ಮುನಿವೆಂಕಟಪ್ಪನವರು ತಮಟೆ ನುಡಿಸುವ ವೈಖರಿಗೆ ಅವರೇ ಸಾಟಿ. ಅವರ ತಮಟೆ ದನಿ ಕೇಳಿದರೆ ಸಾಕು ಕೇಳುವವರ ಮೈ ತುಂಬಾ ಮುಂಗಾರು ಮಿಂಚು ಸಾಲು. ತಮಟೆಯಲ್ಲಿ ನುಡಿಸಲಸಾಧ್ಯವಾದ ನುಡಿಗಳನ್ನು ನುಡಿಸುತ್ತಾ ತಾವೇ ಒಂದು ತಮಟೆಯಾದಂತೆ ಅವರ ಅಣುಅಣುವೂ ಕಣ ಕಣವೂ ನಾದವೇ, ರಕ್ತಪೂರ್ಣ ಸಂವೇದನೆಯ ವಸಂತವೇ. ಒಟ್ಟಾರೆ ತಮಟೆ ವಾದನಕ್ಕೂ ಹೊಸ ಶೈಲಿ, ನಾವೀನ್ಯ ತಂದುಕೊಟ್ಟಿರುವುದು ಮುನಿವೆಂಕಟಪ್ಪನವರ ಅಪ್ಪಟ ಕೌಶಲ್ಯಕ್ಕೊಂದು ಸಾಕ್ಷಿ. `ತಮಟೆ ನುಡಿಸುವಾಗ ದೇವರು ನಮ್ಮ ಸಪೋರ್ಟ್‌ಗಿರ್ತಾನೆ' ಎಂದು ನಂಬಿರುವ ಶ್ರೀಯುತರಿಗೆ ನಮ್ಮ ಈ ಪ್ರಶಸ್ತಿ ಅದಕ್ಕಿಂತ ಹೆಚ್ಚು ಸಂತೋಷ ಕೊಡಲಾರದು ಎಂದು ಭಾವಿಸುತ್ತಾ ಕರಗದಲ್ಲಿ ತಮಟೆ ಬಾರಿಸುವಾಗ ಸ್ವತಃ ಅವರು ಪಡುವಷ್ಟು ಆನಂದವನ್ನೇ ನಾವು ಅನುಭವಿಸುತ್ತಾ ನಮ್ಮ ಎಂದಿನ ಕರ್ತವ್ಯದ ಭಾಗವಾಗಿ 2007ನೇ ಸಾಲಿನ ಪ್ರತಿಷ್ಠಿತ ಡಾ.ಎಲ್.ಬಸವರಾಜು ಪ್ರಶಸ್ತಿಯನ್ನು ಅವರಿಗೆ ಸಲ್ಲಿಸುತ್ತಿದ್ದೇವೆ.

ಡಾ.ಎಲ್.ಬಸವರಾಜು ಈ ನಾಡು ಕಂಡ ಘನ ವಿದ್ವಾಂಸರಷ್ಟೇ ಅಲ್ಲದೆ ಅಲಕ್ಷಿತ ನುಡಿ ಪರಂಪರೆಗಳನ್ನು ಶೋಧಿಸಿ ಅವುಗಳಿಗೆ ಸಲ್ಲಬೇಕಾದ ಘನತೆಯ ಸ್ಥಾನವನ್ನು ಮರಳಿ ದಕ್ಕಿಸಿಕೊಡುತ್ತಿರುವ ಅಂತಃಕರಣಿಗಳು. ಇಂತಹ ಮಹನೀಯರ ಹೆಸರಿನಲ್ಲಿ ಕೊಡಮಾಡುತ್ತಾ ಬಂದಿರುವ ಈ ಪ್ರಶಸ್ತಿ ಮುನಿವೆಂಕಟಪ್ಪನವರ ತಮಟೆಯ ದನಿಯನ್ನು ಸದಾ ಮೊಳಗಿಸುತ್ತಿರಲಿ, ಆ ಮೂಲಕ ತಮಟೆಯ ನಾದಮಯತೆ ಮತ್ತಷ್ಟು ಗೌರವಾರ್ಹ ನೆಲೆಗಳಿಗೆ ಏರಲಿ. ಅವರ ಗರಡಿಯಲ್ಲಿ ನೂರಾರು ಕಲಾವಿದರು ಬೆಳೆದು ಬೆಳಗಲಿ, ತಮಟೆ ವಾದನದ ಸಮೂಹ ಹೆಚ್ಚು ಒಕ್ಕಲಾಗುತ್ತಲೇ ಇರುವಂತೆ ಮಾಡಲಿ ಎಂದು ಆಶಿಸುತ್ತೇವೆ.


1 comment:

ಜಾತ್ರೆ said...

Registration- Seminar on the occasion of kannadasaahithya.com 8th year Celebration

Dear blogger,

On the occasion of 8th year celebration of Kannada saahithya.

com we are arranging one day seminar at Christ college.

As seats are limited interested participants are requested to

register at below link.

Please note Registration is compulsory to attend the seminar.

If time permits informal bloggers meet will be held at the same venue after the seminar.

For further details and registration click on below link.

http://saadhaara.com/events/index/english

http://saadhaara.com/events/index/kannadaPlease do come and forward the same to your like minded friends
-kannadasaahithya.com balaga